ನೀರ್ಗಲ್ಲು ಗುಡ್ಡ -
ಹಿಮನದಿಯಿಂದ ಬೇರ್ಪಟ್ಟು ಕಡಲು ಸೇರಿ ತೇಲುತ್ತಿರುವ ಭೂಮಗಾತ್ರದ ನೀರ್ಗಲ್ಲ ರಾಶಿ (ಐಸ್‍ಬರ್ಗ್). ಪ್ರಪಂಚದ ಹಲವೆಡೆಗಳಲ್ಲಿ ಹಿಮ ಶಾಶ್ವತವಾಗಿ ರಾಶಿಗೂಡಿರುತ್ತದೆ. ವರ್ಷವಿಡೀ ಹಿಮಮಯವಾಗಿರುವ ಪ್ರದೇಶಗಳನ್ನು ಹಿಮರೇಖೆಯ ಮೂಲಕ ವಿಂಗಡಿಸಿ ಸೂಚಿಸುವರು. ಈ ರೇಖೆ ಪ್ರಪಂಚದ ಎಲ್ಲ ಭಾಗಗಳಲ್ಲಿ ಒಂದೇ ಮಟ್ಟದಲ್ಲಿ ಇರುವುದಿಲ್ಲ. ಗ್ರೀನ್‍ಲೆಂಡ್, ಉತ್ತರ ಮತ್ತು ದಕ್ಷಿಣ ಧ್ರುವ ಖಂಡಗಳ ಭಾಗಗಳಲ್ಲಿ ಹಿಮರೇಖೆಯ ಮಟ್ಟ ಸಮುದ್ರ ಮಟ್ಟಕ್ಕೆ ಸಮವಾಗಿರುತ್ತದೆ. ಹಿಮಮಯ ಪರ್ವತಪ್ರದೇಶಗಳ ಕಣಿವೆಗಳಲ್ಲಿ ಒಟ್ಟುಗೂಡಿದ ಹಿಮರಾಶಿಗಳು ಹಿಮನದಿಗಳನ್ನು ಉಂಟುಮಾಡುತ್ತವೆ. ಇವು ನೆಲದ ಇಳಿಜಾರಿಗೆ ಅನುಗುಣವಾಗಿ ನಿಧಾನವಾಗಿ ಹರಿಯುತ್ತ ಸಮುದ್ರದ ಅಂಚಿಗೆ ಬಂದಾಗ ಇವುಗಳ ಹರಿವಿನ ಇಳುಕಲಿನಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಇದರಿಂದ ಎಳೆತ ಸಂಭವಿಸಿ, ಹಿಮನದಿಗಳಿಂದ ವಿವಿಧಾಕಾರದ ದೊಡ್ಡ ದೊಡ್ಡ ಹಿಮಗಡ್ಡೆಗಳು ಸಿಡಿದು, ಸಮುದ್ರದಲ್ಲಿ ತೇಲುತ್ತವೆ. ಈ ರೀತಿ ಸಿಡಿದ ಹಿಮಭಾಗಗಳೇ ಹಿಮಪ್ಲಾವಿಗಳು ಅಥವಾ ನೀರ್ಗಲ್ಲ ಬೆಟ್ಟಗಳು.

ದಕ್ಷಿಣ ಧ್ರುವ ಪ್ರದೇಶದ ಹಿಮಪ್ಲಾವಿಗಳು ಹಲವಾರು ಕಿಲೋಮೀಟರ್ ಅಗಲವಾಗಿರುವ 50 ಅಂತಸ್ತುಗಳ ಕಟ್ಟಡದಷ್ಟು ಎತ್ತರವಾಗಿವೆ. ಉತ್ತರಭಾಗದವು ಸಾಮಾನ್ಯವಾಗಿ 1.6 ಕಿಮೀ ಅಗಲ ಮತ್ತು 30.5 ಮೀಗಳಷ್ಟು ಎತ್ತರ ಇದೆ. ಹಿಮಪ್ಲಾವಿಗಳು ವಾಸ್ತುಶಿಲ್ಪ ವೈಭವದಲ್ಲಿ ಈಜಿಪ್ಟಿನ ನೆಲಗೋಪುರಗಳನ್ನೂ ಗಭೀರತೆಯಲ್ಲಿ ಸಿಂಹಮಾನವಗಳನ್ನೂ (ಸ್ಫಿಂಕ್ಸ್) ಮೀರಿಸುತ್ತವೆ. ಇವುಗಳಲ್ಲಿ ಸೂರ್ಯ ಪ್ರಕಾಶ ಬಿಂಬಿಸಿದಾಗ ಕಾಮನಬಿಲ್ಲಿನ ಬಣ್ಣಗಳನ್ನು ಕಾಣಬಹುದು. ಕೆಲವು ಹಿಮ ಪ್ಲಾವಿಗಳಲ್ಲಿ ತೆರೆಗಳು ಕೊರೆದು ಮಾಡಿದ ಗುಹೆಗಳಿವೆ. ಅವು ಕಡುನೇರಿಳೆ ಬಣ್ಣದವಾಗಿ ತೋರುತ್ತವೆ. ಇರುಳಿನಲ್ಲಿ ಹಿಮಪ್ಲಾವಿಗಳು ಕಡಲುಗಳಲ್ಲಿ ತೇಲುತ್ತ ಮುಂದುವರಿಯುವಾಗ ಪ್ರೇತಾಕಾರದ ಬಣ್ಣದಿಂದ ಹೊಳೆಯುವುವು.

ತೇಲುತ್ತಿರುವ ನೀರ್ಗಲ್ಲುಗುಡ್ಡಗಳಲ್ಲಿ ನೀರಿನ ಮೇಲೆ ಕಾಣಿಸುವ 30 ಸೆಂಮೀ ಎತ್ತರಕ್ಕೆ ಅದರ ರಚನಾರೀತಿ ಮತ್ತು ಲಕ್ಷಣಗಳನ್ನು ಹೊಂದಿಕೊಂಡು, 2.5 ಮೀನಿಂದ 3 ಮೀ ವರೆಗೆ ನೀರಿನ ಅಡಿಯಲ್ಲಿರುತ್ತವೆ. ಬೆಚ್ಚನೆಯ ಸಾಗರದ ನೀರಿಗೆ ಬಂದಾಗ ಹಿಮಪ್ಲಾವಿ ಕರಗುತ್ತವೆ. ಆ ಮೊದಲು ಅದು 3,200 ಕಿಮೀಗಳಷ್ಟು ದೂರ ಸಂಚರಿಸಬಲ್ಲದು. ತನ್ನ ಹೆಚ್ಚಿನ ಅಂಶವನ್ನು ನೀರಿನ ಅಡಿಯಲ್ಲಿ ಮರೆಮಾಚಿಕೊಂಡು ತೇಲುವುದರಿಂದ ನೀರ್ಗಲ್ಲುಗುಡ್ಡ ನೌಕಾಸಂಚಾರಕ್ಕೆ ಅಪಾಯಕಾರಿ. ಮಂಜು ಮುಸುಕಿದಾಗಲಂತೂ ನೌಕೆಗಳು ಅರಿವಿಲ್ಲದೆ ಹಿಮಪ್ಲಾವಿಗಳಿಗೆ ಬಡಿದು ಚೂರುಚೂರಾಗಿ ಹೋಗುವುದುಂಟು. 1912ರಲ್ಲಿ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಸಂಭವಿಸಿದ ಟೆಟಾಸಿಕ್ ಮಹಾನೌಕೆಯ ಪ್ರಥಮ ಪ್ರಯಾಣದ ದುರಂತವೇ ನೌಕಾಘಾತ ಚರಿತ್ರೆಯಲ್ಲಿಯ ಅತ್ಯಂತ ಭೀಕರ ನಿದರ್ಶನ. ಮುಂದೆ ಅಂತಾರಾಷ್ಟ್ರೀಯ ಹಿಮಪ್ಲಾವಿ ಕಾವಲುಪಡೆಯ ಸಹಾಯದಿಂದ ಅಟ್ಲಾಂಟಿಕ್ ಸಾಗರದಲ್ಲಿಯ ಹಿಮಪ್ಲಾವಿಗಳನ್ನು ಪತ್ತೆಹಚ್ಚಿ ಸಂಚರಿಸುವ ನೌಕೆಗಳಿಗೆ ಎಚ್ಚರಿಕೆ ನೀಡುವ ಏರ್ಪಾಡನ್ನು ಮಾಡಲಾಯಿತು.
(ಎಂ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ